"ಕಲೈಗ್ನಾರ್" ಕರುಣಾನಿಧಿ (ತಮಿಳು:கலைஞர் மு. கருணாநிதி) (1924 ಜೂನ್ 3 - 2018 ಆಗಸ್ಟ್ 7) ಎಂದೇ ಹೆಸರುವಾಸಿಯಾಗಿರುವ ಎಂ. ಕರುಣಾನಿಧಿ ಭಾರತದ ಪ್ರಮುಖ ರಾಜಕಾರಣಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ. ಅವರು ತಮಿಳುನಾಡು ರಾಜ್ಯದ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಮ್‌ನ ಮುಖಂಡರು, ಅಲ್ಲದೆ ಒಬ್ಬ ಉತ್ತಮ ಕವಿ. ದ್ರಾವಿಡ ಮುನ್ನೇತ್ರ ಕಳಗಂ(ಡಿ ಎಂ ಕೆ)ಯ ಸ್ಥಾಪಕರಾದ ಸಿ.ಎನ್.ಅಣ್ಣಾದೊರೈ 1969ರಲ್ಲಿ ತೀರಿಹೋದ ನಂತರ ಇವರು ಅದರ ಮುಖಂಡತ್ವ ವಹಿಸಿಕೊಂಡರು. ಅವರು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ (1969-71, 1971-76, 1989-91, 1996-2001 ಮತ್ತು 2006-ಇಂದಿನವರೆಗೆ). 60 ವರ್ಷಗಳ ದೀರ್ಘಕಾಲದ ರಾಜಕೀಯ ವೃತ್ತಿಜೀವನದಲ್ಲಿ ಅವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಸ್ಥಾನದಲ್ಲಿ ಜಯಿಸುವ ಮ‌ೂಲಕ ದಾಖಲೆ ಮಾಡಿದ್ದಾರೆ. 2004ರ ಲೋಕಸಭೆ ಚುನಾವಣೆಯಲ್ಲಿ ಅವರು ತಮಿಳುನಾಡು ಮತ್ತು ಪುದುಚೇರಿ ಯಲ್ಲಿ ಎಲ್ಲಾ 40 ಲೋಕ ಸಭೆ ಸ್ಥಾನಗಳನ್ನು ಗೆಲ್ಲಲು ಡಿ.ಎಂ.ಕೆ-ನೇತೃತ್ವದ ಡಿ.ಪಿ.ಎ(ಯು.ಪಿ.ಎ ಮತ್ತು ಎಡ ಪಕ್ಷಗಳು) ಮುಂದಾಳತ್ವ ವಹಿಸಿದರು. ನಂತರದ 2009ರ ಲೋಕ ಸಭೆ ಚುನಾವಣೆಯಲ್ಲಿ ಡಿ.ಎಂ.ಕೆಯ ಸ್ಥಾನಗಳನ್ನು 16ರಿಂದ 18ಕ್ಕೆ ಹೆಚ್ಚಿಸಿಕೊಳ್ಳಲು ಸಮರ್ಥರಾದರು ಹಾಗೂ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಯು.ಪಿ.ಎಯ ನೇತೃತ್ವ ವಹಿಸಿಕೊಂಡು,ಗಮನಾರ್ಹವಾಗಿ ಸಣ್ಣ ಸಮ್ಮಿಶ್ರಕೂಟವಾಗಿದ್ದರೂ 28 ಸ್ಥಾನಗಳನ್ನು ಜಯಿಸಿದರು. == ಬಾಲ್ಯ ಜೀವನ == ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿ ಮಗನಾಗಿ 1924ರ ಜೂನ್ 3ರಲ್ಲಿ ಜನಿಸಿದ ಕರುಣಾನಿಧಿಯವರ ಮೊದಲ ಹೆಸರು ದಕ್ಷಿಣಾಮೂರ್ತಿ . ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಆಗಿನ ತಂಜಾವೂರು ಜಿಲ್ಲೆ (ಈಗ ತಿರುವರೂರ್ ಜಿಲ್ಲೆ) ಜಿಲ್ಲೆಯ ತಿರುಕ್ಕುವಲೈ ಇವರ ಹುಟ್ಟೂರು. ಇವರು ತಮಿಳುನಾಡಿನ ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದ್ದಾರೆ. == ರಾಜಕೀಯ == ಕರುಣಾನಿಧಿ ಅವರ ಸಮ್ಮಿಶ್ರಕೂಟವು 2006ರ ಮೇಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಮುಖ ವಿರೋಧಿ . ಜಯಲಲಿತಾರನ್ನು ಸೋಲಿಸಿದ ನಂತರ 2006ರ ಮೇ 13ರಲ್ಲಿ ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ೨೦೦೬ರವರೆಗೆ ತಮಿಳುನಾಡು ರಾಜ್ಯದ ವಿಧಾನಸಭೆಯಲ್ಲಿ ಸೆಂಟ್ರಲ್ ಚೆನ್ನೈಯ ಚೇಪಾಕ್ ಚುನಾವಣಾಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ತಮಿಳುನಾಡು ವಿಧಾನಸಭೆಗೆ 11 ಬಾರಿ ಆಯ್ಕೆಯಾಗಿದ್ದರು ಹಾಗೂ ಈಗ ರದ್ದುಗೊಂಡ ತಮಿಳುನಾಡು ವಿಧಾನಪರಿಷತ್ ಗೆ ಒಮ್ಮೆ ಆಯ್ಕೆಯಾಗಿದ್ದರು. ಕರುಣಾನಿಧಿಯವರು ತಮಿಳು ಚಿತ್ರೋದ್ಯಮದಲ್ಲಿ ಕಥಾಲೇಖಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಚತುರೋಕ್ತಿ ಮತ್ತು ಉತ್ತಮ ಭಾಷಣ ಕಲೆಗೆ ಅವರು ಪ್ರಸಿದ್ಧರಾಗಿದ್ದರು. ಆ ಗುಣಗಳು ಅವರಿಗೆ ಪ್ರಖ್ಯಾತ ರಾಜಕಾರಣಿಯಾಗಿ ಕ್ಷಿಪ್ರವಾಗಿ ಬೆಳೆಯಲು ಸಹಕಾರಿಯಾದವು. ಅವರು ಐತಿಹಾಸಿಕ ಮತ್ತು ಸಾಮಾಜಿಕ (ಸುಧಾರಣಾವಾದಿ) ಕಥೆಗಳ ಬರಹಕ್ಕೆ ಹೆಸರುವಾಸಿಯಾಗಿದ್ದಾರೆ, ಇದು ಅವರು ಸಂಬಂಧ ಹೊಂದಿದದ್ರಾವಿಡ ಚಳವಳಿಯ ಸಮಾಜವಾದಿ ಮತ್ತು ವಿಚಾರವಾದಿ ಸಿದ್ಧಾಂತಗಳನ್ನು ಪ್ರಸಾರ ಮಾಡಿತು. ಕರುಣಾನಿಧಿಯವರು ಜಸ್ಟಿಸ್ ಪಾರ್ಟಿಯ ಅಳಗಿರಿಸ್ವಾಮಿಯವರ ಭಾಷಣ ಕೇಳಿ ಪ್ರೇರಿತರಾಗಿ ತಮ್ಮ 14ನೇ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಇಳಿದರು ಹಾಗೂ 1932ರಲ್ಲಿ ಅಳಗಿರಿಸ್ವಾಮಿಯವರಿಂದ ಹೆಚ್ಚು ಪ್ರಭಾವಿತರಾಗಿ ಹಿಂದಿ-ವಿರೋಧಿ ಚಳವಳಿಗಳಲ್ಲಿಯ‌ೂ ಭಾಗವಹಿ ಸಿದರು. ಅವರ ಪ್ರದೇಶದ ಯುವಜನರಿಗಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಸದಸ್ಯರಿಗೆ ಕೈಬರಹದ ಪತ್ರಿಕೆ 'ಮಾನವರ್ ನೇಸನ್'ಅನ್ನು ಹಂಚಿದರು. ನಂತರ 'ತಮಿಳುನಾಡು ತಮಿಳು ಮಾನವರ್ ಮನ್ರಮ್' ಎಂಬ ಒಂದು ವಿದ್ಯಾರ್ಥಿ ಸಂಘವನ್ನು ಕಟ್ಟಿದರು. ಇದು ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ತಂಡ. ಕರುಣಾನಿಧಿ ಸ್ವತಃ ವಿದ್ಯಾರ್ಥಿ ಸಮುದಾಯದ ಜತೆ ಇತರೆ ಸದಸ್ಯರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಕೊಂಡರು. ಅವರು ಸಮೀಪದ ಗುಡಿಸಲುಗಳಿಗೆ ಭೇಟಿಕೊಟ್ಟು ತಮ್ಮ ಕೈಲಾದ ಎಲ್ಲ ನೆರವು ನೀಡಿದರು. ಈ ಸದಸ್ಯರಿಗಾಗಿ ಇಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿದರು, ಅದು ಮುಂದೆ ಡಿ.ಎಂ.ಕೆ ಪಕ್ಷದ ಅಧಿಕೃತ ಪತ್ರಿಕೆಯಾದ ಮುರಸೊಳಿ ಪತ್ರಿಕೆಯಾಗಿ ಬೆಳೆಯಿತು. === ಅಧಿಕಾರ ಪ್ರಾಪ್ತಿಯೆಡೆಗೆ === ಕರುಣಾನಿಧಿಯವರು ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲು ಚುನಾಯಿತರಾದರು. ದಾಲ್ಮಿಯಪುರಮ್ ರೈಲು ನಿಲ್ದಾಣದ ಹೆಸರು ಬದಲಾವಣೆಗಾಗಿ ಮಾಡಿದ ಚಳವಳಿಯ ಸಂದರ್ಭದಲ್ಲಿ ಅವರನ್ನು ಬಂಧಿಸಿ, ತಿರುಚಿರಾಪಲ್ಲಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು. ಅವರು 1961ರಲ್ಲಿ ಡಿ.ಎಂ.ಕೆ ಕೋಶಾಧಿಕಾರಿಯಾದರು ಹಾಗೂ 1962ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದರು. 1967ರಲ್ಲಿ ಡಿ.ಎಂ.ಕೆ ಅಧಿಕಾರಕ್ಕೆ ಬಂದಾಗ, ಲೋಕೋಪಯೋಗಿ ಇಲಾಖೆಯ ಮಂತ್ರಿ ಪದವಿ ಪಡೆದರು. 1969ರಲ್ಲಿ ಅಣ್ಣಾದೊರೈ ನಿಧನರಾದ ನಂತರ, ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾದರು. ತಮಿಳುನಾಡು ರಾಜಕೀಯ ರಂಗದಲ್ಲಿನ ಅವರ ಸುದೀರ್ಘ ವೃತ್ತಿಜೀವನದಲ್ಲಿ ಪಕ್ಷ ಮತ್ತು ಸರಕಾರದಲ್ಲಿ ಅವರು ವಿವಿಧ ಸ್ಥಾನಗಳನ್ನು ಹೊಂದಿದ್ದರು. ==== ಲೆಜಿಸ್ಲೇಟಿವ್ ಅಸೆಂಬ್ಲಿ(ಶಾಸನಸಭೆ)ಯ ಸದಸ್ಯ ==== ==== ಶಾಸನಸಭೆಯ ಸ್ಥಾನಗಳು ==== ==== ಮುಖ್ಯಮಂತ್ರಿ ==== == ಸಾಹಿತ್ಯ/ಕಲೆ == ತಮಿಳು ಸಾಹಿತ್ಯದ ಬಗ್ಗೆ ವಿಪುಲ ಜ್ಞಾನ ಮತ್ತು ಅದಕ್ಕೆ ನೀಡಿದ ಕೊಡುಗೆಗಾಗಿ ಕರುಣಾನಿಧಿಯವರು ಬಹುಪ್ರಸಿದ್ಧರು. ಕವನಗಳು, ಪತ್ರಗಳು, ಚಿತ್ರಕಥೆಗಳು, ಕಾದಂಬರಿಗಳು, ಜೀವನ ಚರಿತ್ರೆ, ಐತಿಹಾಸಿಕ ಕಾದಂಬರಿಗಳು, ರಂಗಕೃತಿ, ಸಂಭಾಷಣೆ, ಗೀತೆಗಳು ಇತ್ಯಾದಿ ವ್ಯಾಪಕ ಕ್ಷೇತ್ರಗಳಲ್ಲಿ ಇವರು ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ತಿರುಕುರಲ್‌ಗೆ ಕುರಲೋವಿಯಮ್ , ತೋಲ್ಕಾಪ್ಪಿಯ ಪೂಂಗ, ಪೂಂಬುಕಾರ್ ಮೊದಲಾದವುಗಳನ್ನು ಕೌಶಲದಿಂದ ರಚಿಸಿದ್ದಲ್ಲದೆ ಹಲವಾರು ಕವನಗಳು, ಪ್ರಬಂಧಗಳು ಮತ್ತು ಪುಸ್ತಕಗಳನ್ನೂ ಬರೆದಿದ್ದಾರೆ. ಕರುಣಾನಿಧಿಯವರು ಸಾಹಿತ್ಯವಲ್ಲದೆ ಕಲೆ ಮತ್ತು ವಾಸ್ತುಶಿಲ್ಪ ರಚನೆಯ ಮ‌ೂಲಕ ತಮಿಳು ಭಾಷೆಗೆ ವಿಶೇಷ ಕಾಣಿಕೆ ಸಲ್ಲಿಸಿದ್ದಾರೆ. ಇವರು ತಿರುಕ್ಕುರಳ್ ಕುರಿತು ಕುರಲೋವಿಯಮ್‌ ಬರೆದುದಲ್ಲದೆ, ತಮಿಳುನಾಡಿನ ಚೆನ್ನೈನಲ್ಲಿ ವಳ್ಳುವರ್ ಕೊಟ್ಟಮ್ ನಿರ್ಮಾಣದ ಮ‌ೂಲಕ ತಿರುವಳ್ಳುವರ್ ಪ್ರತಿಮೆಗೆ ವಾಸ್ತುಶಿಲ್ಪದ ವಿನ್ಯಾಸವನ್ನು ನೀಡಿದ್ದಾರೆ. ಕರುಣಾನಿಧಿಯವರು ಕನ್ಯಾಕುಮಾರಿಯಲ್ಲಿ 133 ಅಡಿ ಎತ್ತರದ ತಿರುವಳ್ಳುವರ್ ‌ಮ‌ೂರ್ತಿಯನ್ನು ಪ್ರತಿಸ್ಠಾಪಿಸಿದರು. ಇದು ಚಿರಸ್ಥಾಯಿ ವಿದ್ವಾಂಸರ ಬಗೆಗಿನ ಅವರ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. === ಪುಸ್ತಕಗಳು === ಹಾಗೂ ಗದ್ಯ ಮತ್ತು ಕವನಗಳಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳು. === ರಂಗಕೃತಿಗಳು === ಇತ್ಯಾದಿ. === ಚಿತ್ರಕಥೆಗಳು === 20ರ ವಯಸ್ಸಿನಲ್ಲಿ ಕರುಣಾನಿಧಿಯವರು ಜುಪಿಟರ್ ಪಿಕ್ಚರ್ಸ್‌ನಲ್ಲಿ ಕಥಾಲೇಖಕರಾಗಿ ಕೆಲಸ ಆರಂಭಿಸಿದರು. ಅವರ ಮೊದಲ ಸಿನಿಮಾ ರಾಜಕುಮಾರಿ ಅವರಿಗೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟಿತು. ಇಲ್ಲಿ ಕಥಾಲೇಖಕರಾಗಿ ಅವರ ಕೌಶಲಗಳು ಗೋಚರವಾದವು. ಅವರು 70ಕ್ಕಿಂತಲೂ ಹೆಚ್ಚು ಚಿತ್ರಕಥೆಗಳನ್ನು ಬರೆದರು, ಅವುಗಳಲ್ಲಿ ಕೆಲವು ಹೀಗಿವೆ: === ಸಂಪಾದಕರು ಮತ್ತು ಪ್ರಕಾಶಕರು === ಕರುಣಾನಿಧಿಯವರು 10.8.1942ರಲ್ಲಿ ಮುರಸೊಳಿ ಯನ್ನು ಆರಂಭಿಸಿದರು. ಅವರ ಬಾಲ್ಯಾವಸ್ಥೆಯಲ್ಲಿ ಮಾಸಪತ್ರಿಕೆಯಾಗಿ ಪ್ರಾರಂಭಿಸಿದ "ಮುರಸೊಲಿ"ಗೆ ಸ್ಥಾಪಕ-ಸಂಪಾದಕ,ಪ್ರಕಾಶಕರಾಗಿದ್ದರು. ನಂತರ ವಾರಪತ್ರಿಕೆ, ಈಗ ದಿನಪತ್ರಿಕೆಯಾಗಿ ಅದು ಬೆಳೆಯಿತು. ಅವರ ರಾಜಕೀಯ ಚಿಂತನೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಜನರ ಮುಂದೆ ತರಲು ಪತ್ರಕರ್ತರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರನ್ನು ಉದ್ದೇಶಿಸಿ ಅವರ ಹೆಸರಿಗೆ ಪ್ರತಿದಿನ ಪತ್ರಗಳನ್ನು ಬರೆಯುತ್ತಾರೆ. ಈ ರೀತಿ ಪತ್ರ ಬರವಣಿಗೆಯನ್ನು ಕಳೆದ 50 ವರ್ಷಗಳಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಇದಲ್ಲದೆ ಅವರು "ಕುಡಿಯರಸು" ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು ಹಾಗೂ 'ಮುತಾರಮ್' ಪತ್ರಿಕೆಗೆ ಹೊಸಜೀವ ತುಂಬಿದರು. ಸ್ಟೇಟ್ ಗವರ್ನ್‌ಮೆಂಟ್ ನ್ಯೂಸ್ ರೀಲ್, ಅರಸು ಸ್ಟುಡಿಯೊ ಹಾಗೂ ತಮಿಳು ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಪ್ರಕಟವಾದ ಗವರ್ನ್‌ಮೆಂಟ್ ಜರ್ನಲ್ "ತಮಿಳ್ ಅರಸು" ಮೊದಲಾದವುಗಳ ಸಂಸ್ಥಾಪಕರು ಇವರು. === ವಿಶ್ವ ತಮಿಳು ಅಧಿವೇಶನ === ಪ್ಯಾರಿಸ್‌ನಲ್ಲಿ 1970ರಲ್ಲಿ ನಡೆದ 3ನೇ ವಿಶ್ವ ತಮಿಳು ಅಧಿವೇಶನದ ಉದ್ಘಾಟನೆ ಕಾರ್ಯಕ್ರಮ ಹಾಗೂ 1987ರಲ್ಲಿ ಕ್ವಾಲ ಲಂಪುರ್‌ನಲ್ಲಿ (ಮಲೇಷಿಯಾ) ನಡೆದ 6ನೇ ವಿಶ್ವ ತಮಿಳು ಅಧಿವೇಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇವರು ವಿಶೇಷ ಭಾಷಣ ಮಾಡಿದರು. == ವಿವಾದಗಳು == ವೀರನಮ್ ಯೋಜನೆ ಕಾಮಗಾರಿಯ ಟೆಂಡರುಗಳ ಮಂಜೂರಾತಿಯಲ್ಲಿ ಭ್ರಷ್ಟಾಚಾರ ಎಸಗಲಾಗಿದೆಯೆಂದು ಕರುಣಾನಿಧಿಯವರು ಸರ್ಕಾರಿಯ ಆಯೋಗದಿಂದ ದೋಷಾರೋಪಕ್ಕೆ ಗುರಿಯಾದರು. ಇಂದಿರಾ ಗಾಂಧಿಯವರು ಕರುಣಾನಿಧಿ ಸರಕಾರವನ್ನು ಸಂಭವನೀಯ ಪ್ರತ್ಯೇಕತೆ ಮತ್ತು ಭ್ರಷ್ಟಾಚಾರದ ಆರೋಪಗಳ ಮೇಲೆ ವಜಾಗೊಳಿಸಿದರು. ಚೆನ್ನೈಯಲ್ಲಿನ ಮೇಲುಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ ಕರುಣಾನಿಧಿ, ಮಾಜಿ ಮುಖ್ಯ ಕಾರ್ಯದರ್ಶಿ .. ನಂಬಿಯಾರ್ ಹಾಗೂ ಇತರರನ್ನು ಶನಿವಾರ ನಸುಕಿನಲ್ಲೇ ಬಂಧಿಸಲಾಗಿತ್ತು. ಅವರು ಮತ್ತು ಅವರ ಪಕ್ಷದ ಸದಸ್ಯರ ವಿರುದ್ಧ IPCಯ ಪರಿಚ್ಛೇದ 120() (ಕ್ರಿಮಿನಲ್ ಒಳಸಂಚು), 167 (ಸಾರ್ವಜನಿಕ ಸೇವಕ ದುರುದ್ದೇಶದಿಂದ ತಪ್ಪು ದಾಖಲೆ ರಚನೆ), 420 (ವಂಚನೆ) ಮತ್ತು IPCಯ 409 (ವಿಶ್ವಾಸ ದ್ರೋಹದ ಅಪರಾಧ) ಹಾಗೂ ಪರಿಚ್ಛೇದ 13 (2)ರಲ್ಲಿರುವ 13 (1)()ಯ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿಯಲ್ಲಿ ಆರೋಪ ಹೊರಿಸಲಾಯಿತು. === ಭಗವಾನ್ ಶ್ರೀರಾಮನ ಮೇಲಿನ ಟೀಕೆಗಳು === ಶ್ರೀರಾಮನನ್ನು ಕುರಿತ ಅವರ ಕೆಳಗಿನ ಟೀಕೆಗಳು ವಿವಾದಕ್ಕೆ ಗುರಿಯಾದವು. "ರಾಮಾಯಣದ ಕರ್ತೃ ವಾಲ್ಮೀಕಿಗಿಂತ ಹೊಸದಾಗಿ ನಾನೇನು ಹೇಳಿಲ್ಲ. ವಾಲ್ಮೀಕಿಯೇ ರಾಮನನ್ನು ಕುಡುಕ ಎಂದಿದ್ದಾರೆ. ನಾನು ಹಾಗೆ ಹೇಳಿದ್ದೇನೆಯೇ?" “17 ಲಕ್ಷ ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಇದ್ದ ಎಂದು ಕೆಲವರು ಹೇಳುತ್ತಾರೆ. ಅವನ ಹೆಸರು ರಾಮನಂತೆ ಅವನು ನಿರ್ಮಿಸಿದ ಸೇತುವೆಯನ್ನು (ರಾಮರ್ ಸೇತು) ಯಾರೂ ಮುಟ್ಟಬಾರದಂತೆ. ಈ ರಾಮ ಯಾರು? ಅವನು ಯಾವ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದ? ಇದಕ್ಕೆ ಏನಾದರೂ ಸಾಕ್ಷ್ಯಾಧಾರಗಳಿವೆಯೇ? ” ಸ್ವಲ್ಪ ತಗ್ಗಿದ ಧ್ವನಿಯಲ್ಲಿ ಅವರು ಮತ್ತೆ ಹೀಗೆ ಹೇಳುತ್ತಾರೆ - ``ನನ್ನ ದೇವರೂ ರಾಮಸ್ವಾಮಿ" ಈ ಟೀಕೆಗಳನ್ನು ಭಾರತೀಯ ಮಾಧ್ಯಮವು "ಅಧಾರ್ಮಿಕ", "ಸಂಸ್ಕಾರಹೀನ" ಮತ್ತು "ಅಪಾಯಕಾರಿ" ಎಂದು ವಿವಿಧ ರೀತಿಯಲ್ಲಿ ಬಣ್ಣಿಸಿದವು. === ಎಲ್.ಟಿ.ಟಿ.ಇ ಜತೆ ಸಂಪರ್ಕ === ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮ‌ೂರ್ತಿ ಜೈನ್ ಆಯೋಗದ ಮಧ್ಯಂತರ ವರದಿಯು ಎಲ್.ಟಿ.ಟಿ.ಇ ಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ಕರುಣಾನಿಧಿಯವರ ಮೇಲೆ ದೋಷಾರೋಪ ಹೊರಿಸಿತು. ಪ್ರಸ್ತುತ ಅವರು ಎಲ್.ಟಿ.ಟಿ.ಇ ಯನ್ನು ಬೆಂಬಲಿಸುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತು ಡಿ.ಎಂ.ಕೆ ಪಕ್ಷವು ರಾಜೀವ್ ಗಾಂಧಿ ಹತ್ಯೆಕೋರರಿಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ಜವಾಬ್ದಾರರನ್ನಾಗಿ ಮಾಡಬೇಕು ಎಂದು ಮಧ್ಯಂತರ ವರದಿಯು ಶಿಫಾರಸು ಮಾಡಿತು. ಅಂತಿಮ ವರದಿಯು ಅಂತಹ ಯಾವುದೇ ಆಪಾದನೆಗಳನ್ನು ಹೊಂದಿಲ್ಲ.[೨] 2004-02-28 ವೇಬ್ಯಾಕ್ ಮೆಷಿನ್ ನಲ್ಲಿ.. ಕರುಣಾನಿಧಿ 2009ರ ಏಪ್ರಿಲ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದರು "...ಪ್ರಭಾಕರನ್ ನನ್ನ ಉತ್ತಮ ಸ್ನೇಹಿತ...". ನಂತರ "ರಾಜೀವ್ ಗಾಂಧಿಯನ್ನು ಹತ್ಯೆಗೈದುದಕ್ಕಾಗಿ ಎಲ್.ಟಿ.ಟಿ.ಇ ಯನ್ನು ಭಾರತ ಕ್ಷಮಿಸಲು ಸಾಧ್ಯವಿಲ್ಲ" ಎಂದೂ ಹೇಳಿದರು. === ಕುಟುಂಬದಲ್ಲಿನ ವಾದ-ವಿವಾದಗಳು === ಕರುಣಾನಿಧಿಯವರು ಸ್ವಜನಪಕ್ಷಪಾತ ಉತ್ತೇಜಿಸಲು ಹಾಗೂ ನೆಹರು-ಗಾಂಧಿ ಕುಟುಂಬದ ಮಾದರಿಯಲ್ಲಿ ಒಂದು ರಾಜಕೀಯ ವಂಶಾಡಳಿತ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿ ವಿರೋಧ ಪಕ್ಷಗಳು, ಅವರ ಪಕ್ಷದ ಅನೇಕ ಸದಸ್ಯರು ಹಾಗೂ ಕೆಲವು ರಾಜಕೀಯ ವೀಕ್ಷಕರು ದೂಷಿಸಿದರು. ಹೀಗೆ ಖಂಡಿಸಿದವರಲ್ಲಿ ಡಿ.ಎಂ.ಕೆ ಅನ್ನು ಬಿಟ್ಟುಹೋದ ವೈಕೊ ಧ್ವನಿ ದೊಡ್ಡದಾಗಿತ್ತು. ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬದ ಇತರ ಸದಸ್ಯರಿಗೆ ವೈಕೊ ಅಪಾಯದ ಸೂಚನೆಯಾಗಿ ಕಂಡು ಬಂದುದರಿಂದ ಅವರನ್ನು ಬದಿಗೊತ್ತಲಾಯಿತು ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಕರುಣಾನಿಧಿಯವರ ಸೋದರಳಿಯ ದಿವಂಗತ ಮುರಸೊಳಿ ಮಾರನ್ ಕೇಂದ್ರ ಸಚಿವರಾಗಿದ್ದರು. ಆದಾಗ್ಯೂ 1969ರಲ್ಲಿ ಕರುಣಾನಿಧಿಯವರು ಮುಖ್ಯಮಂತ್ರಿಯಾಗುವುದಕ್ಕೆ ಬಹುಹಿಂದೆಯೇ ಅವರು ರಾಜಕಾರಣದಲ್ಲಿದ್ದರು ಎಂದು ಸ್ಪಷ್ಟಪಡಿಸಲಾಯಿತು. ಅವರು 1965ರಲ್ಲಿ ಹಿಂದಿ-ವಿರೋಧಿ ಚಳವಳಿಗಳಿಗಾಗಿ ಅಲ್ಲದೆ ಇನ್ನೂ ಅನೇಕ ಬಾರಿ ಬಂಧನಕ್ಕೊಳಗಾದರು. 1967ರ ದಕ್ಷಿಣ ಮದ್ರಾಸ್ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾರನ್ ಅವರನ್ನು ಕೇಳಿಕೊಳ್ಳಲಾಯಿತು ಹಾಗೂ ರಾಜಾಜಿ, ಅಣ್ಣಾದೊರೈ ಮತ್ತು ಮಹಮ್ಮದ್ ಇಸ್ಮಾಯಿಲ್ (ಕ್ವೈದ್-ಇ-ಮಿಲ್ಲೆತ್) ಮೊದಲಾದವರು ನಾಮಪತ್ರಕ್ಕೆ ಸಹಿಹಾಕಿದರು, ಇವೆಲ್ಲವೂ ಅವರ ರಾಜಕೀಯ ವೃತ್ತಿಜೀವನ ಕರುಣಾನಿಧಿಯವರಿಂದಾಗಿಯೇ ಬೆಳೆಯಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪಕ್ಷದಲ್ಲಿ ಎಂ.ಕೆ ಸ್ಟಾಲಿನ್‌ನ ಬೆಳವಣಿಗೆಯ ಬಗ್ಗೆ ಹೆಚ್ಚಿನ ರಾಜಕೀಯ ವಿರೋಧಿಗಳು ಮತ್ತು ಡಿ.ಎಂ.ಕೆ ಪಕ್ಷದ ಹಿರಿಯ ಮುಖಂಡರು ಬೇಸರದಿಂದ ಟೀಕಿಸಿದರು. ಆದರೆ ಪಕ್ಷದ ಕೆಲವರು ಎಂ.ಕೆ.ಸ್ಟಾಲಿನ್ ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದಾರೆ ಎಂದು ಗಮನಸೆಳೆದರು. ಅವರು 1975ರ ಸಂದರ್ಭದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದರು,ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕಾಯ್ದೆಯ ಮೇಲೆ ಅವರನ್ನು ಜೈಲಿಗೆ ತಳ್ಳಿ ಅವರನ್ನು ಕ್ರೂರವಾಗಿ ಥಳಿಸಲಾಯಿತು. ಆ ಸಂದರ್ಭದಲ್ಲಿ ಅವರನ್ನು ಉಳಿಸಲು ಪ್ರಯತ್ನಿಸಿದ ಡಿ.ಎಂ.ಕೆ ಪಕ್ಷದ ಸಹವರ್ತಿ ಕೈದಿಯೊಬ್ಬ ಸಾವನ್ನಪ್ಪಿದ. ಸ್ಟಾಲಿನ್ ತಂದೆ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1989 ಮತ್ತು 1996ರಲ್ಲಿ ಸ್ಟಾಲಿನ್ ವಿಧಾನಸಭೆಯ ಸದಸ್ಯರಾಗಿದ್ದರು, ಆದರೂ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿ ಕೊಂಡಿರಲಿಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಚೆನ್ನೈನ 44ನೇ ಮೇಯರ್ ಆದರು, ಆದರೆ ಮೊದಲ ಬಾರಿಗೆ ನೇರವಾಗಿ ಮೇಯರ್ ಆಗಿ ಚುನಾಯಿತರಾದದ್ದು 1996ರಲ್ಲಿ. ಅವರು 4ನೇ ಅವಧಿಗೆ ವಿಧಾನಸಭೆಯ ಸದಸ್ಯರಾಗಿದ್ದ ಸಂದರ್ಭದಲ್ಲಿ ಕರುಣಾನಿಧಿ ಸಚಿವ ಸಂಪುಟದಲ್ಲಿ ಮಂತ್ರಿ ಪದವಿ ಪಡೆದರು,ಅವರ ಬೆಳವಣಿಗೆ ನಿಧಾನ ಮತ್ತು ಸ್ಥಿರವಾಗಿತ್ತು. ಮುರಸೊಳಿ ಮಾರನ್‌ ಪುತ್ರ, ಭಾರತದ ಎರಡನೇ ಅತಿದೊಡ್ಡ ದೂರದರ್ಶನ ಜಾಲ ಸನ್ ನೆಟ್ವರ್ಕ್ ನಡೆಸುತ್ತಿರುವ ಹಾಗೂ ಫೋರ್ಬ್ಸ್ ಪ್ರಕಾರ $1.9 ಶತಕೋಟಿ ಆಸ್ತಿಯೊಂದಿಗೆ ಭಾರತದ 20 ಮಂದಿ ಅತೀ ಶ್ರೀಮಂತರಲ್ಲಿ ಒಬ್ಬರಾದ ಕಲಾನಿಧಿ ಮಾರನ್‌ಗೆ ಕರುಣಾ ನಿಧಿಯವರು ಸಹಾಯ ಮಾಡುತ್ತಿದ್ದಾರೆ ಎಂದು ಆಪಾದಿಸಲಾಯಿತು.[೩]. ಕಲಾನಿಧಿ ಮಾರನ್ ಸ್ವಂತ ಅರ್ಹತೆಯಿಂದ ಈ ಸ್ಥಾನಕ್ಕೆ ಏರಿದ್ದಾರೆ ಹಾಗೂ ಅವರಿಗೆ ಹೋಲಿಸಿದರೆ ಕರುಣಾನಿಧಿಯವರ ಮಕ್ಕಳು ಸಾಧಿಸಿದ್ದು ಏನೇನೂ ಅಲ್ಲ, ಇದೇ ಅವರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಟೀಕಾಕಾರರು ಹೇಳುತ್ತಾರೆ. ಅವರ ಚಾನೆಲ್‌ಗಳು ಡಿ.ಎಂ.ಕೆ ಪಕ್ಷದ (ಇತ್ತೀಚಿನವರೆಗೆ) ಮುಖವಾಣಿಯಾಗಿತ್ತು ಮತ್ತು ಎ.ಐ.ಡಿ.ಎಂ.ಕೆಯ ಜಯಾ ಟಿ.ವಿಗೆ ಸಮಸ್ಥಿತಿಯಲ್ಲಿತ್ತು. ಮಾರನ್‌ನ ಮತ್ತೊಬ್ಬ ಮಗ ದಯಾನಿಧಿ ಮಾರನ್ ಸಂಪರ್ಕ ಮತ್ತು ಐ.ಟಿ ಖಾತೆಯ ಮಾಜಿ ಕೇಂದ್ರ ಸಚಿವರು, ಇದು ಟಿ.ವಿ ನೆಟ್ವರ್ಕ್‌ಗಳಿಗೆ ಜವಾಬ್ದಾರವಾಗಿರುವ ಪ್ರಸಾರ ಮಾಧ್ಯಮದ ಸಚಿವಾಲಯವಲ್ಲ. ದಯಾನಿಧಿ ಮಾರನ್ ಕೇಂದ್ರದಲ್ಲಿನ ಅವರ ಐ.ಟಿ ಮತ್ತು ಸಂಪರ್ಕ ಖಾತೆಯಿಂದ ಹೊರಹಾಕಲ್ಪಟ್ಟರು ಎಂಬುದು ಹೆಚ್ಚು ವಿವಾದಿತ ಮತ್ತು ಎಲ್ಲರಿಗೂ ತಿಳಿದ ವಿಷಯವಾಗಿತ್ತು.(ಅವರು ಐ.ಟಿ ಮತ್ತು ಸಂಪರ್ಕ ಖಾತೆ ಕೇಂದ್ರ ಸಚಿವರಾಗಿದ್ದರು). ಏಕೆಂದರೆ ದಿನಕರನ್ ದಿನಪತ್ರಿಕೆಯು (ಮಾರನ್ ಸಹೋದರರು ನಡೆಸುತ್ತಿದ್ದರು) ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಪ್ರಕಟಿಸಿತು. ಇದರಿಂದ ದಿನಕರನ್ ಕಚೇರಿಯ ಮಧುರೈ ವಿಭಾಗದಲ್ಲಿ ಹಿಂಸಾಚಾರದಿಂದ ನೆತ್ತರುಹರಿದು(ಎಂ.ಕೆ.ಅಳಗಿರಿಯ ನೇತೃತ್ವದಲ್ಲಿ) ಮ‌ೂರು ಉದ್ಯೋಗಿಗಳು ಸಾವನ್ನಪ್ಪಿದರು. ಇದು ಕರುಣಾನಿಧಿ ಕುಟುಂಬದೊಳಗಿನ ವಂಶಾಡಳಿತ ವಿವಾದದ ಫಲಿತಾಂಶ ಎಂದು ಪುನಃ ವ್ಯಾಖ್ಯಾನಿಸಲಾಯಿತು. ಕರುಣಾನಿಧಿ ತಮ್ಮ ಕುಟುಂಬದ ಸದಸ್ಯರು ತಪ್ಪುಮಾಡಿದಾಗಲೆಲ್ಲ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದುಮುಂದು ನೋಡುತ್ತಾರೆ ಎಂದು ಟೀಕಿಸಲಾಗಿತ್ತು. ಕರುಣಾನಿಧಿ ಯವರ ಮಕ್ಕಳಾದ ಎಂ.ಕೆ.ಮುತ್ತು ಮತ್ತು ಎಂ.ಕೆ.ಅಳಗಿರಿಯವರು ತಪ್ಪುಎಸಗಿದ್ದಕ್ಕಾಗಿ ಅವರನ್ನು ಕರುಣಾನಿಧಿ ಉಚ್ಚಾಟಿಸಿದರು. ಹಾಗೂ ಅದೇ ರೀತಿ ದಯಾನಿಧಿ ಮಾರನ್ ಅವರನ್ನೂ ಕೇಂದ್ರ ಸಚಿವ ಸ್ಥಾನದಿಂದ ತೆಗೆದುಹಾಕಿದ್ದರು.(ಕಾರಣವನ್ನು ಹಿಂದಿನ ಸಾಲಿನಲ್ಲಿ ವಿವರಿಸಲಾಗಿದೆ). ಆದರೆ, ಎಂ.ಕೆ.ಅಳಗಿರಿ ಬೆಂಬಲಿಗರು ದಿನಕರನ್ ಪತ್ರಿಕಾ ಕಚೇರಿಗೆ ದಾಳಿ ಮಾಡಿ 3 ಮಂದಿ ಬಲಿಯಾದ ನಂತರ(ಮೇಲೆ ಹೇಳಿದಂತೆ) ಅಳಗಿರಿ ವಿರುದ್ಧ ವಿರುದ್ಧ ಯಾವುದೇ ಕ್ರಮ ಕೈ ಗೊಳ್ಳಲಿಲ್ಲವೆಂದು ಕರುಣಾನಿಧಿ ವಿರುದ್ಧ ಆರೋಪಿಸಲಾಯಿತು. ಮಾಜಿ ಡಿ.ಎಂ.ಕೆ ಸಚಿವ ಕಿರುಟ್ಟಿನನ್‌ ಕೊಲೆ ಪ್ರಕರಣದಲ್ಲಿ ಎಂ.ಕೆ.ಅಳಗಿರಿ ಪ್ರಮುಖ ಆರೋಪಿ. ಕರುಣಾನಿಧಿಯವರು ಪಕ್ಷದ ವತಿಯಿಂದ ಡಿಎಂಕೆ ಸದಸ್ಯನಲ್ಲದ ಪುತ್ರ ಅಳಗಿರಿಯವರನ್ನು ಮಧುರೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆಗೆ ಕಳಿಸಿದ್ದು ಪಕ್ಷದ ಸಂವಿಧಾನ ಬಾಹಿರ ಕಾರ್ಯವಾಗಿದೆಯೆಂದು ಕರುಣಾನಿಧಿ ವಿರುದ್ಧ ಆರೋಪಿಸಲಾಯಿತು.ಆದ್ದರಿಂದ ಅಧ್ಯಕ್ಷರಾಗಿರುವ ಕರುಣಾನಿಧಿಯವರನ್ನು ಪಕ್ಷವಿರೋಧಿ ಚಟುವಟಿಕೆಗಾಗಿ ಡಿಎಂಕೆಯಿಂದ ಏಕೆ ಉಚ್ಚಾಟಿಸಬಾರದೆಂದು ಟೀಕಾಕಾರರು ಪ್ರಶ್ನಿಸಿದರು. ದಿನಕರನ್ ದಿನಪತ್ರಿಕೆ ಪ್ರಕರಣದ ತನಿಖೆಯನ್ನು ಸಿ.ಬಿ.ಐಗೆ ವಹಿಸಿಕೊಡಲಾಯಿತು. ಟೀಕಾಕಾರರು ಮತ್ತು ಅವರ ಪಕ್ಷದ ಅನೇಕ ಮಂದಿ ಹೇಳಿರುವಂತೆ ಪಕ್ಷಕ್ಕಾಗಿ ಕಿಂಚಿತ್ ಕೆಲಸ ಮಾಡಿದ್ದರೂ,ಕರುಣಾನಿಧಿ ಪುತ್ರಿ ಕಿನ್ನಿಮೊಳಿ ರಾಜ್ಯ ಸಭೆ ಸ್ಥಾನವೊಂದಕ್ಕೆ ನಾಮನಿರ್ದೇಶಿತರಾದರು. ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಈಗ ಎಂ.ಕೆ.ಸ್ಟಾಲಿನ್ ಕುಟುಂಬದಲ್ಲಿ ಮಾತ್ರವಲ್ಲದೆ ಪಕ್ಷದಲ್ಲೂ ಕರುಣಾನಿಧಿಯವರ ಉತ್ತರಾಧಿಕಾರಿ ಎಂದು ಪಕ್ಷದ ಸದಸ್ಯರಿಗೆ ಮತ್ತು ನಾಯಕರಿಗೆ ಸ್ಪಷ್ಟ ಸಂಕೇತ ನೀಡಲು ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಲಾಗಿದೆ ಹಾಗೂ ಈ ಮ‌ೂಲಕ ಸಮಾಜವಾದಿ ತತ್ವಗಳಿಗೆ ಬದ್ಧವಾಗಿದ್ದ ಪಕ್ಷವನ್ನು ಈಗ ಕುಟುಂಬ ಆಧರಿತ ಪಕ್ಷವಾಗಿ ಪರಿವರ್ತಿಸಲಾಗಿದೆ. ಕುಟುಂಬದ ಸದಸ್ಯರ ನಡುವೆ ಮಾತ್ರ ಅಧಿಕಾರವನ್ನು ಹಂಚಿಕೊಳ್ಳುವ ಮತ್ತು ಎಲ್ಲ ಪ್ರಮುಖ ಹುದ್ದೆಗಳು ಹಳೆಯ ಜಮೀನ್ದಾರಿ/ವಂಶಪಾರಂಪರ್ಯ ಆಡಳಿತಗಾರರಂತೆ ಕುಟುಂಬದ ಸದಸ್ಯರ ನಡುವೆ ವಿತರಣೆಯಾಗುತ್ತದೆ ಎಂದು ಟೀಕಿಸಲಾಗಿತ್ತು. ಆದಾಗ್ಯೂ,ಎಂ.ಕೆ.ಸ್ಟಾಲಿನ್ ಪ್ರಸ್ತುತ ಸ್ಥಾನದಲ್ಲಿ ಆಡಳಿತಗಾರನಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಎ.ಐ.ಡಿ.ಎಂ.ಕೆ ಸೇರಿದಂತೆ ವಿರೋಧ ಪಕ್ಷಗಳ ಅನೇಕ ಸದಸ್ಯರು ಒಪ್ಪಿಕೊಂಡಿರುವುದು ನಿಜ. == ವೈಯುಕ್ತಿಕ ಜೀವನ == ಕರುಣಾನಿಧಿಯವರು ಮ‌ೂಲತಃ ಮಾಂಸಾಹಾರಿ, ಆದರೆ ಈಗ ಸಸ್ಯಾಹಾರಿಯಾಗಿದ್ದಾರೆ. ಅವರ ಶಕ್ತಿ ಮತ್ತು ಯಶಸ್ಸಿನ ಗುಟ್ಟು ಯೋಗ ಮತ್ತು ಪ್ರತಿದಿನದ ಅಭ್ಯಾಸದಲ್ಲಿ ಅಡಗಿದೆ ಎಂದು ಹೇಳುತ್ತಾರೆ. ಅವರು ಮ‌ೂರು ಬಾರಿ ವಿವಾಹವಾಗಿದ್ದಾರೆ. ಅವರ ಪತ್ನಿಯರೆಂದರೆ - ಶ್ರೀಮತಿ ಪದ್ಮಾವತಿ, ಶ್ರೀಮತಿ ದಯಾಲು ಅಮ್ಮಾಳ್ ಮತ್ತು ಶ್ರೀಮತಿ ರಾಜದಿಯಮ್ಮಾಳ್. ಅವರಿಗೆ ಎಂ.ಕೆ.ಮುತ್ತು, ಎಂ.ಕೆ.ಅಳಗಿರಿ, ಎಂ.ಕೆ.ಸ್ಟಾಲಿನ್, ಎಂ.ಕೆ.ತಮಿಳರಸು ಎಂಬ ನಾಲ್ಕು ಪುತ್ರರಿದ್ದಾರೆ ಹಾಗೂ ಸೆಲ್ವಿ ಮತ್ತು ಕನಿಮೊಳಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರು ಹೆಣ್ಣುಮಕ್ಕಳಾದ ಸೆಲ್ವಿ ಮತ್ತು ಕನಿಮೊಳಿ, ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ ಅವರಲ್ಲಿ ಕನಿಮೊಳಿ ಅಧಿಕಾರ ಸ್ಥಾನವನ್ನು ಹೊಂದಿದ್ದಾರೆ. ಪದ್ಮಾವತಿ ಮುಂಚೆಯೇ ಅಕಾಲಿಕ ಮರಣವಪ್ಪಿದ್ದು, ಹಿರಿಯ ಮಗ ಎಂ.ಕೆ.ಮುತ್ತುಗೆ ಜನ್ಮ ನೀಡಿದ್ದರು. ಅಳಗಿರಿ, ಸ್ಟಾಲಿನ್, ಸೆಲ್ವಿ ಮತ್ತು ತಮಿಳರಸು ದಯಾಲುವಮ್ಮಲ್ ಅವರಿಗೆ ಜನಿಸಿದವರಾಗಿದ್ದು, ಕನಿಮೊಳಿ ಮ‌ೂರನೇ ಹೆಂಡತಿ ರಾಜದಿಯಮ್ಮಲ್‌ ಅವರಿಂದ ಜನಿಸಿದ ಏಕೈಕ ಪುತ್ರಿ. == ಪ್ರಶಸ್ತಿಗಳು ಮತ್ತು ಬಿರುದುಗಳು == ಅವರನ್ನು ಪ್ರೀತಿಪೂರ್ವಕವಾಗಿ ಕಲೈಗ್ನಾರ್ , ಮುತಮಿಳ್ ಕಾವಿಗ್ನಾರ್ ಎಂದು ಕರೆಯುತ್ತಾರೆ. ಅಣ್ಣಾಮಲೈ ವಿಶ್ವವಿದ್ಯಾನಿಲಯ ಅವರಿಗೆ 1971ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿತು. ತಂಜಾವೂರಿನ ತಮಿಳು ವಿಶ್ವವಿದ್ಯಾನಿಲಯವು ಅವರ ಪುಸ್ತಕ "ತೇನ್‌ಪಾಂಡಿ ಸಿಂಗಮ್"‌ಗಾಗಿ "ರಾಜ ರಾಜನ್ ಪ್ರಶಸ್ತಿ" ನೀಡಿ ಗೌರವಿಸಿತು. ತಮಿಳುನಾಡಿನ ಘನತೆವೆತ್ತ ರಾಜ್ಯಪಾಲ ಮತ್ತು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ತಿರು ಸುರ್ಜಿತ್ ಸಿಂಗ್ ಬರ್ನಾಲರು 2006ರ ಡಿಸೆಂಬರ್ 15ರಲ್ಲಿ, 40ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಆದರಿಸಿದರು. 2007ರ ಜೂನ್‌ನಲ್ಲಿ, . ಕರುಣಾನಿಧಿಯವರಿಗೆ ತಮಿಳುನಾಡು ಮುಸ್ಲಿಮ್ ಮಕ್ಕಳ್ ಕಚ್ಚಿಯು 'ಮುಸ್ಲಿಮ್ ಸಮುದಾಯದ ಸ್ನೇಹಿತ' ('ಯಾರನ್-ಇ-ಮಿಲ್ಲತ್') ಎಂಬ ಬಿರುದು ನೀಡುವುದಾಗಿ ಘೋಷಿಸಿತು. == ನಿಧನ == ಕರುಣಾನಿಧಿಯವರು ೦೭ಆಗಸ್ಟ್ ೨೦೧೮ರಂದು ಚೆನ್ನೈಯಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು. == ಪೂರಕ ಓದಿಗೆ == ಕರುಣಾನಿಧಿ ಬದುಕಿನ ಹಾದಿ; (ಶಿವಕುಮಾರ ಜಿ.ಎನ್. 07 ಆಗಸ್ಟ್ 2018,) ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು;;ಪ್ರಜಾವಾಣಿ ;; 07 ಆಗಸ್ಟ್ 2018 ದ್ರಾವಿಡಸೂರ್ಯ ಅಸ್ತಂಗತ ಕರಣಾನಿಧಿ ಕುಟುಂಬ- ವಂಶವೃಕ್ಷ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮುತುವೇಲ್ ಕರುಣಾನಿಧಿ: ಒನ್ ಹಂಡ್ರೆಡ್ ತಮಿಳ್ಸ್ ಆಫ್ 20 ಸೆಂಚುರಿ